ಬೆಳ್ಳಂಬೆಳಗ್ಗೆ ಭಾರತೀಯ ಸೇನೆಯ ಭರ್ಜರಿ ಭೇಟೆ, ಪಂಜಾಬ್ ಬಳಿ ಒಳನುಸುಳಲು ಯತ್ನಿಸುತ್ತಿದ್ದ ಐವರು ಉಗ್ರರು ಮಟಾಶ್

ಭಾರತ-ಪಾಕ್ ಅಂತಾರಾಷ್ಟ್ರೀಯ ಗಡಿಭಾಗದಿಂದ ಪಂಜಾಬ್ ಪ್ರದೇಶಕ್ಕೆ ಒಳನುಸುಳಿದ್ದ ಐವರು ವ್ಯಕ್ತಿಗಳನ್ನ ಭಾರತದ ಗಡಿಭದ್ರತಾ ಪಡೆಯ ಸೈನಿಕರು ಕೊಂದುಹಾಕಿದ್ದಾರೆ.

ಹಿರಿಯ ಸೇನಾಧಿಕಾರಿಯೊಬ್ಬರು ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಗಡಿದಾಟಿ ಬಂದದ್ದನ್ನ ಪ್ರಶ್ನಿಸಿದ್ದಕ್ಕೆ ಗುಂಡಿನ ದಾಳಿ ಎಸಗಿದ ಹಿನ್ನೆಲೆಯಲ್ಲಿ ಪ್ರತಿದಾಳಿ ನಡೆಸಿ ಅವರನ್ನು ಸಾಯಿಸಲಾಯಿತು ಎಂದು ಬಿಎಸ್ಎಫ್ ಅಧಿಕಾರಿ ತಿಳಿಸಿದ್ಧಾರೆ.

“ಪಂಜಾಬ್‌ನ ತರನ್ ತಾರನ್ ಸಾಹಿಬ್ ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಗಡಿ ನಿಯಮ ಉಲ್ಲಂಘಿಸಿದ ವ್ಯಕ್ತಿಗಳು ಅನುಮಾನಾಸ್ಪದವಾಗಿ ಸಂಚರಿಸುತ್ತಿರುವುದು ಕಂಡ ಬಂದ ನಂತರ 103ನೇ ಬೆಟಾಲಿಯನ್ ತುಕಡಿಗಳನ್ನ ಎಚ್ಚರಿಸಲಾಯಿತು.

ಅವರನ್ನ ನಿಲ್ಲಿಸಲು ಹೇಳಿದಾಗ ಆ ವ್ಯಕ್ತಿಗಳು ಬಿಎಸ್ಎಫ್ ತುಕಡಿಗಳ ಮೇಲೆ ಗುಂಡಿನ ದಾಳಿ ನಡೆಸಿದರು. ಆತ್ಮರಕ್ಷಣೆಗಾಗಿ ಪ್ರತಿದಾಳಿ ನಡೆಸಲಾಯಿತು. ಆಗ ಆ ಐವರು ವ್ಯಕ್ತಿಗಳು ಸಾವನ್ನಪ್ಪಿದರು” ಎಂದು ಬಾರ್ಡರ್ ಸೆಕ್ಯೂರಿಟಿ ಫೋರ್ಸ್ನ ಸೇನಾಧಿಕಾರಿ ವಿವರ ನೀಡಿದ್ದಾರೆ.

ಬೆಳಗ್ಗಿನ 4:45ರ ವೇಳೆಯಲ್ಲಿ ಈ ಘಟನೆ ನಡೆದಿದೆ. ಈಗ ಈ ಪ್ರದೇಶಾದ್ಯಂತ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎನ್ನಲಾಗಿದೆ. ಈ ಪ್ರದೇಶದಲ್ಲಿ ಮಾದಕದ್ರವ್ಯಗಳ ಸಾಗಾಟ, ಅಕ್ರಮ ಶಸ್ತ್ರಾಸ್ತ್ರಗಳ ಸಾಗಾಟ ಅವ್ಯಾಹತವಾಗಿ ನಡೆಯುತ್ತದೆ.
Previous Post Next Post