ಭಾರತೀಯ ಯೋಧರ ಭರ್ಜರಿ ಭೇಟೆ, ಮೂವರು ಉಗ್ರರು ಮಟಾಶ್

ಜಮ್ಮು ಕಾಶ್ಮೀರದಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಯೋಧರು ಮೂವರು ಉಗ್ರರನ್ನು ಸದೆ ಬಡಿದಿದ್ದಾರೆ. ಜಮ್ಮು ಕಾಶ್ಮೀರದ ಕುಲ್ಗಮ್ ಹಾಗೂ ಹಂದ್ವಾರದಲ್ಲಿ ಘಟನೆ ನಡೆದಿದ್ದು, ಒಟ್ಟು ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ.

ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ. ಇಂದು ಬೆಳಗ್ಗೆ ಭದ್ರತಾ ಸಿಬ್ಬಂದಿ ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ಏರ್ಪಟ್ಟಿದ್ದು, ಈ ವೇಳೆ ಉಗ್ರರನ್ನು ಹತ್ಯೆ ಮಾಡಲಾಗಿದೆ. ಒಬ್ಬ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಉಗ್ರ ಸಾವನ್ನಪ್ಪಿದ್ದು, ಅದೇ ಸ್ಥಳದಲ್ಲಿ ಸಿಕ್ಕಿಬಿದ್ದ ಇನ್ನಿಬ್ಬರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇಡೀ ಪ್ರದೇಶವನ್ನು ಸುತ್ತುವರಿಯಲಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ.

ಮತ್ತೊಂದು ಘಟನೆಯಲ್ಲಿ ಇಬ್ಬರು ಎಲ್‍ಇಟಿ ಉಗ್ರರು ಹತರಾಗಿದ್ದಾರೆ. ಜಮ್ಮು ಕಾಶ್ಮೀರದ ಹಂದ್ವಾರಾದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಸಾವನ್ನಪ್ಪಿದ ಇಬ್ಬರ ಪೈಕಿ ಒಬ್ಬನನ್ನು ಎಲ್‍ಇಟಿ ಕಮಾಂಡರ್ ನಸೀರ್ ಉದ್ದೀನ್ ಲೋನ್ ಎಂದು ಗುರುತಿಸಲಾಗಿದೆ. ಈತ ಸೋಪೂರ್ ಹಾಗೂ ಹಂದ್ವಾರದಲ್ಲಿ ಸೈನಿಕರ ಹುತಾತ್ಮರಾಗಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂಬ ಪೊಲೀಸರು ತಿಳಿಸಿದ್ದಾರೆ.

ಹಂದ್ವಾರದಲ್ಲಿ ನಡೆದ ಎನ್‍ಕೌಂಟರ್ ನಲ್ಲಿ ಸಾವನ್ನಪ್ಪಿದ ಎಲ್‍ಇಟಿ ಕಮಾಂಡರ್ ನಸೀರ್ ಉದ್ದಿನ್ ಲೋನ್ ಏಪ್ರಿಲ್ 18ರಂದು ಮೂವರು ಹಾಗೂ ಮೇ 4ರಂದು ಸೊಪೂರದಲ್ಲಿ ಮೂವರು ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ಜಮ್ಮು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ಮಾಹಿತಿ ನೀಡಿದ್ದಾರೆ.

ಹಂದ್ವಾರ ಜಿಲ್ಲೆಯ ಕ್ರಲ್ಗುಂದ್ ಗಣಿಪುರ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿ ಏರ್ಪಟ್ಟಿದ್ದು, ಸಿಆರ್‍ಪಿಎಫ್ ಯೋಧರು ಹಾಗೂ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಘಟನಾ ಸ್ಥಳದಿಂದ ಎರಡು ಎಕೆ 47 ಹಾಗೂ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


Previous Post Next Post